ಮೊಹರಂ: ನಮ್ಮ ನಾಡಿನ ಸಾಮರಸ್ಯದ ಜೀವಂತ ಸಂಸ್ಕೃತಿ

ಮುದ್ಗಲ್ ಮೊಹರಂ
ಮುದ್ಗಲ್ ಮೊಹರಂನಲ್ಲಿ ಅಗ್ಗಿ ತುಳಿಯುತ್ತಿರುವ ಮಹಿಳೆ

ಮೊಹರಂ ಕೇವಲ ಒಂದು ಧಾರ್ಮಿಕ ಆಚರಣೆ ಅಲ್ಲ. ಇದು ನಮ್ಮ ನಾಡಿನ ಸಾಂಸ್ಕೃತಿಕ ಸ್ಮೃತಿ, ಮಾನವೀಯ ಮೌಲ್ಯಗಳು ಮತ್ತು ಕೋಮುಸೌಹಾರ್ದದ ಜೀವಂತ ಪ್ರತೀಕ. ಹಿಂದೂ–ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಜನರು ಒಗ್ಗೂಡಿ ಆಚರಿಸುವ ಈ ಶೋಕಾಚರಣೆ, ಧರ್ಮಗಳ ನಡುವಿನ ಗಡಿಗಳನ್ನು ಮೀರಿದ ಒಗ್ಗಟ್ಟಿನ ಉದಾಹರಣೆಯಾಗಿ ಕರ್ನಾಟಕದ ಅನೇಕ ಊರುಗಳಲ್ಲಿ ಇಂದಿಗೂ ಜೀವಂತವಾಗಿದೆ.

ಅರಬ್‌ನ ಕರಬಲಾ ಮೈದಾನದಲ್ಲಿ ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್, ಹಾಗೂ ಅವರೊಂದಿಗೆ ಬಲಿದಾನ ಮಾಡಿದ 72 ಸಂಗಡಿಗರ ಸ್ಮರಣಾರ್ಥವಾಗಿ ಮೊಹರಂ ಆಚರಿಸಲಾಗುತ್ತದೆ. ದೂರದ ನಾಡಿನಲ್ಲಿ ನಡೆದ ಈ ದುರಂತವು ನಮ್ಮ ನೆಲದಲ್ಲಿ ಧಾರ್ಮಿಕ ಶೋಕದಿಂದ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರಗೊಂಡಿರುವುದು ವಿಶೇಷ.

ಮೊಹರಂ: ಶೋಕಾಚರಣೆಯ ಐತಿಹಾಸಿಕ ಹಿನ್ನೆಲೆ

ಮೂಲತಃ ಮೊಹರಂ ಒಂದು ಶೋಕಾಚರಣೆ.ಇಸ್ಲಾಂ ಧರ್ಮದ ಉಳಿವಿಗಾಗಿ ಹೋರಾಡಿದ ಹಸನ್–ಹುಸೇನ್ ಸಹೋದರರ ತ್ಯಾಗವನ್ನು ನೆನೆಸಿಕೊಳ್ಳುವ ಈ ತಿಂಗಳು, ಅನ್ಯಾಯದ ವಿರುದ್ಧ ನಿಂತ ಧೈರ್ಯದ ಸಂಕೇತವಾಗಿದೆ. ಇತ್ತೀಚಿನ ದಿನಗಳಲ್ಲಿ, ಕಾಲಕ್ರಮೇಣ ಈ ಆಚರಣೆ ಕೆಲವು ಕಡೆ ಉತ್ಸವದ ರೂಪವನ್ನು ಪಡೆದರೂ, ಅದರ ಮೂಲ ತಾತ್ವಿಕ ಅರ್ಥ — ನ್ಯಾಯ, ಬಲಿದಾನ ಮತ್ತು ಮಾನವೀಯತೆ — ಅಚಲವಾಗಿಯೇ ಉಳಿದಿದೆ.

ಇದನ್ನೂ ಓದಿ: ಖಾಜಾ ಬಂದೆ ನವಾಜ್ ದರ್ಗಾ – ಸೂಫಿ ಪರಂಪರೆ ಮತ್ತು ಭಾವೈಕ್ಯದ ಸಂಕೇತ

ಮುದ್ಗಲ್ ಮೊಹರಂ
ಮುದ್ಗಲ್ ಮೊಹರಂನಲ್ಲಿ ಕಂಡು ಬಂದ ಅಳ್ಳಳ್ಳಿ ಬಪ್ಪ ವೇಷಧಾರಿಗಳು

ಮುದಗಲ್‌ನ ಮೊಹರಂ: ಇತಿಹಾಸ ಮತ್ತು ಪರಂಪರೆ

ಮೊಹರಂನ ಸಡಗರವನ್ನು ಸಂಪೂರ್ಣವಾಗಿ ಅನುಭವಿಸಬೇಕೆಂದರೆ, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಪಟ್ಟಣ ಮುದಗಲ್ ಅನ್ನು ನೋಡಲೇಬೇಕು. ಇತಿಹಾಸಕಾರರ ಪ್ರಕಾರ, ಆದಿಲ್ ಶಾಹಿಗಳು ತಮ್ಮ ಆಳ್ವಿಕೆಯ ಕಾಲದಲ್ಲಿ ಕರಬಲಾ ಯುದ್ಧದ ಸ್ಮರಣಾರ್ಥ ಆಲಂ ದೇವರುಗಳನ್ನು ಮುದಗಲ್ ಕೋಟೆಯಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಲ್ಲಿ ಮೊಹರಂ ಒಂದು ನಿರಂತರ ಪರಂಪರೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಚಂದ್ರದರ್ಶನವಾದ ತಕ್ಷಣ ದರ್ಗಾಗಳಲ್ಲಿ ಪಂಜಾಗಳನ್ನು (ಹಸ್ತದ ಸಂಕೇತ) ಪ್ರತಿಷ್ಠಾಪಿಸಲಾಗುತ್ತದೆ. ಕರಬಲಾ ಯುದ್ಧದಲ್ಲಿ ಮಡಿದವರ ನೆನಪಿಗಾಗಿ ಹಸ್ತದ ಸಂಕೇತಗಳನ್ನು ಬಳಸುವುದು, ಶೋಕ ಮತ್ತು ಪುನಃಸ್ಮರಣೆಯ ಸಂಕೇತವಾಗಿದೆ. ದರ್ಗಾಗಳ ಮುಂದೆ ತೆಗೆಯುವ ಆಲಾವಿ ಕುಣಿಗಳು, ಮಡಿದವರನ್ನು ಮತ್ತೆ ಕಾಣುವ ಪ್ರತೀಕವಾಗಿ ಜನಮನದಲ್ಲಿ ನಂಬಿಕೆಯಾಗಿ ಉಳಿದಿವೆ.


ಹತ್ತು ದಿನಗಳ ಒಗ್ಗಟ್ಟಿನ ಆಚರಣೆ

ಮೊಹರಂ ಹತ್ತು ದಿನಗಳ ಕಾಲ ನಡೆಯುವ ಆಚರಣೆ. ಇಲ್ಲಿ ಬಡವ–ಬಲ್ಲಿದ, ಮೇಲು–ಕೀಳು ಎಂಬ ಯಾವುದೇ ಭೇದವಿಲ್ಲ. ಊರಿನ ಎಲ್ಲಾ ಸಮುದಾಯಗಳ ಜನರು ಭಾಗವಹಿಸಿ, ತಮ್ಮ ಹರಕೆ ತೀರಿಸಲು ಬರುತ್ತಾರೆ. ಹರಕೆ ಹೊತ್ತವರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಧರಿಸಿ ಕುಣಿದು ಕುಪ್ಪಳಿಸುತ್ತಾರೆ. ಕೆಂಪು ಸಕ್ಕರೆ ಹಂಚುವುದು, ಕಂದೂರಿ ಮಾಡುವುದು, ದೀರ್ಘ ದಂಡ ನಮಸ್ಕಾರ ಹಾಕುವುದು - ಇವೆಲ್ಲವೂ ಭಕ್ತಿಯ ವಿಭಿನ್ನ ರೂಪಗಳು. ಹೂವಿನ ಹಾರ, ಬೆಳ್ಳಿ ತೊಟ್ಟಿಲು, ಕುದುರೆ ಆಭರಣಗಳಂತಹ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಜನರು ತಮ್ಮ ನಂಬಿಕೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

ಮುದ್ಗಲ್ ಮೊಹರಂ
ಮುದ್ಗಲ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಭಕ್ತರು
ಮೊಹರಂ ಪದಗಳು ಮತ್ತು ಜನಪದ ಸಂಸ್ಕೃತಿ

ರಾತ್ರಿ ವೇಳೆಗೆ ದರ್ಗಾಗಳ ಆವರಣದಲ್ಲಿ ಯುವಕರು ಆಲಾವಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಹಾಡುಗಾರರು ಹಾಡುವ ಮೊಹರಂ ಪದಗಳು ಈ ಆಚರಣೆಯ ಆತ್ಮವಾಗಿವೆ. ಅವುಗಳಲ್ಲಿ ಕರಬಲಾ ಯುದ್ಧದ ಘೋರ ದೃಶ್ಯಗಳು, ಅನ್ಯಾಯ, ವಂಚನೆ, ಶೌರ್ಯ, ನೋವು ಮತ್ತು ಬಲಿದಾನಗಳ ಕಥನಕಾವ್ಯವಾಗಿ ಜೀವಂತವಾಗುತ್ತವೆ.

ಈ ಪದಗಳಲ್ಲಿ ಕಾಣಿಸುವ ವಿವರಗಳು, ಸ್ಥಳೀಯ ಜನರಿಗೆ ದೂರದ ದೇಶದ ಸಂಸ್ಕೃತಿ ಮತ್ತು ಇತಿಹಾಸದ ಕುರಿತು ಆಳವಾದ ಅರಿವು ಇದ್ದುದಕ್ಕೆ ಸಾಕ್ಷಿಯಾಗಿವೆ. ಹಳ್ಳಿಗಳ ಯುವಕರು ತಂಡ ಕಟ್ಟಿಕೊಂಡು ಬೀದಿಗಳಲ್ಲಿ ನಡೆಸುವ ಹೆಜ್ಜೆಮೇಳ, ಬಿಳಿ ಬಟ್ಟೆ, ಬಣ್ಣಬಣ್ಣದ ಕೊಡೆ, ಗೆಜ್ಜೆ ಸದ್ದು — ಎಲ್ಲವೂ ಈ ಆಚರಣೆಗೆ ವಿಶಿಷ್ಟ ಸೊಗಡನ್ನು ನೀಡುತ್ತವೆ.

ಖತಲ್ ರಾತ್ರಿ: ಬಲಿದಾನದ ಶಿಖರ ಕ್ಷಣ

ಮೊಹರಂನ 9ನೇ ದಿನವನ್ನು ಖತಲ್ ರಾತ್ರಿ ಎಂದು ಆಚರಿಸಲಾಗುತ್ತದೆ. ಈ ದಿನ ಕರಬಲಾ ಮೈದಾನದಲ್ಲಿ ಯಜೀದನ ವಿರುದ್ಧ ಹೋರಾಡಿದ ಹಸನ್–ಹುಸೇನ್ ಸಹೋದರರ ಬಲಿದಾನವನ್ನು ನೆನೆಸಿಕೊಳ್ಳಲಾಗುತ್ತದೆ. ಹಸನ್ ಅವರನ್ನು ವಿಷಪ್ರಾಶನದಿಂದ ಕೊಂದರೆ, ಹುಸೇನ್ ಅವರನ್ನು ಮೋಸದಿಂದ ತಲೆ ಕಡಿದು ಹತ್ಯೆ ಮಾಡಲಾಯಿತು ಎಂಬ ನಂಬಿಕೆ ಇದೆ. ನ್ಯಾಯಕ್ಕಾಗಿ ಹೋರಾಡಿ ಮಡಿದ ಈ ಸಹೋದರರ ಸ್ಮರಣಾರ್ಥ ಈ ರಾತ್ರಿ ಅತ್ಯಂತ ಭಾವನಾತ್ಮಕವಾಗಿರುತ್ತದೆ.

ಬೆಳಗಿನ ಜಾವ ದರ್ಗಾಗಳಲ್ಲಿರುವ ಆಲಂ ದೇವರುಗಳು ಊರಿನಲ್ಲಿ ಸವಾರಿಗೆ ಹೊರಟು ಪರಸ್ಪರ ಭೇಟಿ ಆಗುತ್ತವೆ. ದೇವರು ಬರುವುದು, ಬೆಂಕಿ ತುಳಿಯುವುದು, ಹರಕೆ ತೀರಿಸುವುದು — ಈ ಎಲ್ಲಾ ದೃಶ್ಯಗಳು ಭಕ್ತಿಯ ತೀವ್ರತೆಯನ್ನು ತೋರಿಸುತ್ತವೆ.

ಇದನ್ನೂ ಓದಿ: ನಾಡಹಬ್ಬ ದಸರಾ: ವಿಜಯನಗರದಿಂದ ಮೈಸೂರಿಗೆ ಬಂದಿದ್ದು ಹೀಗೆ..


ಮುದ್ಗಲ್ ಮೊಹರಂ
ಮೊಹರಂ ಹೆಜ್ಜೆಮೇಳ ಕಲಾವಿದರು

ದಫನ್ ಮತ್ತು ಶೋಕಾಚರಣೆಯ ಅಂತಿಮ ದಿನ

10ನೇ ದಿನ ಮಧ್ಯರಾತ್ರಿ ವೇಳೆಗೆ ದಫನ್ ಕಾರ್ಯ ನಡೆಯುತ್ತದೆ. ಕರಬಲಾ ಮೈದಾನದ ಸಂಕೇತವಾಗಿ, ಹಸನ್–ಹುಸೇನ್ ಬಲಿದಾನದ ನೆನಪಿಗಾಗಿ ಆಲಂ ದೇವರುಗಳ ಪಂಜಾಗಳನ್ನು ಹಳೆಪೇಟೆಯಲ್ಲಿರುವ ದೇವರ ಬಾವಿಯಲ್ಲಿ ದಫನ್ ಮಾಡಲಾಗುತ್ತದೆ. ಈ ದಿನವನ್ನು ಶೋಕಾಚರಣೆಯ ದಿನವಾಗಿ ಕೆಲವರು ಉಪವಾಸವೂ ಮಾಡುತ್ತಾರೆ.

ಮೊಹರಂ – ಮಾನವೀಯತೆಯ ಪಾಠ

ಮೊಹರಂ ಶೋಕಮೂಲದ ಆಚರಣೆ ನಿಜ. ಆದರೆ ಅದು ತನ್ನ ಅಂಚನ್ನು ದಾಟಿ ಮಾನವೀಯ ಮೌಲ್ಯಗಳು, ಕೋಮುಸೌಹಾರ್ದ ಮತ್ತು ಜಾತ್ಯತೀತ ನಂಬಿಕೆಗಳನ್ನು ನಮ್ಮ ನಾಡಿನಲ್ಲಿ ಗಟ್ಟಿಗೊಳಿಸಿದೆ. ಧರ್ಮಗಳ ನಡುವೆ ಬಿರುಕು ಮೂಡುತ್ತಿರುವ ಇಂತಹ ಕಾಲದಲ್ಲಿ, ಮೊಹರಂ ನಮಗೆ ಒಗ್ಗಟ್ಟಿನ ಪಾಠ ಕಲಿಸಲಿ ಎಂಬುದೇ ಈ ಆಚರಣೆಯ ನಿಜವಾದ ಅರ್ಥ.

ನವೀನ ಹಳೆಯದು